ಮುಚ್ಚಿ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ (ಪ್ರಾದೇಶಿಕ)

ಇಲಾಖೆಯ ಬಗ್ಗೆ

ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.

ಇಲಾಖೆಯ ಚಟುವಟಿಕೆಗಳು

ಕರ್ನಾಟಕ ಅರಣ್ಯ ಇಲಾಖೆ (ಕಅಇ) ರಾಜ್ಯದಲ್ಲಿರುವ ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಇದು ದುರ್ಬಳಕೆ ತಡೆ ಮತ್ತು ಸರ್ಕಾರಿ ಅರಣ್ಯಗಳಿಂದ ಪಡೆದ ಅರಣ್ಯ ಉತ್ಪನ್ನಗಳ ಮಾರ್ಕೆಟಿಂಗ್‌ ಅನ್ನು ಮೇಲ್ವಿಚಾರಣೆ ನಡೆಸುತ್ತದೆ. ಇದು ಖಾಸಗಿ ಜಮೀನುಗಳಲ್ಲಿ ಬೆಳೆಸಿದ ಮರಗಳ ಕಡಿಯುವಿಕೆಗೆ ಸಂಬಂಧಿಸಿ ಕೆಲವು ನಿಯಂತ್ರಕ ಕಾರ್ಯಗಳನ್ನೂ ನಡೆಸುತ್ತದೆ. ಇದು ಎಲ್ಲ ವಿಧದ ಜಮೀನುಗಳಿಂದ ಅರಣ್ಯ ಉತ್ಪನ್ನಗಳ ಸಾಗಾಟವನ್ನು ನಿಯಂತ್ರಿಸುತ್ತದೆ. ಇದು ಸಾ ಮಿಲ್‌ಗಳು ಮತ್ತು ಮರಮಟ್ಟು ಆಧರಿತ ಉದ್ಯಮಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬದಲಿಸುವುದನ್ನು ಇದು ನಿಯಂತ್ರಿಸುತ್ತದೆ. ಇದು ಲಭ್ಯವಿರುವ ಎಲ್ಲ ಭೂಮಿಯಲ್ಲಿ ಗಿಡ ನೆಡುವುದನ್ನು ಪ್ರೋತ್ಸಾಹಿಸುತ್ತದೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ :

  • (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ;
  • (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.
  • (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
  • (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ.
  • (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು
  • (ಎಫ್‌) ಚಿಣ್ಣರ ವನ ದರ್ಶನ – ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.

     ರಾಜ್ಯ ಮಟ್ಟದ ಜಾಲತಾಣ :  https://aranya.gov.in

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

     ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) ನೊಂದಣಿ ನಮೂನೆ