• ಸೈಟ್ ನಕ್ಷೆ
  • ಪ್ರವೇಶಿಸುವಿಕೆ ಲಿಂಕ್‌ಗಳು
  • ಕನ್ನಡ
ಮುಚ್ಚಿ

ರಾಯಚೂರು ಜಿಲ್ಲೆಯ ಇತಿಹಾಸ

ಕರ್ನಾಟಕದ ಇತಿಹಾಸದಲ್ಲಿ ರಾಜನೂರು, ಇರ್ದೊರೆ ನಾಡು, ಪೆರ್ದೊರೆ ನಾಡು, ಎಡೆದೊರೆನಾಡು, ದೋ-ಆಬ್, ರಾಯರ ಊರು, ಪೆರ್ಮನ ರಾಚೂರು, ರಾಚವೂರು ಮತ್ತು ರಾಚೂರು ಸೀಮೆ ಎಂಬ ಹೆಸರುಗಳಿಂದ ಪ್ರಸಿದ್ಧವಾದ ರಾಯಚೂರು ಜಿಲ್ಲೆಯ ಇತಿಹಾಸ ತುಂಬಾ ವಿಶಿಷ್ಟವಾಗಿದೆ.

ಕರ್ನಾಟಕದ ಚರಿತ್ರೆಯಲ್ಲಿ ರಾಯಚೂರು ಜಿಲ್ಲೆಯ ಇತಿಹಾಸವು ತುಂಬಾ ಮಹತ್ವದ್ದಾಗಿದೆ. ಇಲ್ಲಿನ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಇಲ್ಲಿನ ಭೂ ಸಂಶೋಧನೆಯಿಂದ ದೊರೆತಿರುವ ಕಲ್ಲಿನ ರೇಖಾ ಚಿತ್ರಗಳು, ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು ಪೂರ್ವ ಶಿಲಾಯುಗದ ಕೈ ಕೊಡಲಿಯ ಸಂಸ್ಕೃತಿಯ ಇರುವಿಕೆಯ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡಾ ರಾಯಚೂರಿನಲ್ಲಿ ದೊರೆತಿವೆ. ಹರಪ್ಪಾ ಮಹೆಂಜೊದಾರೊದಲ್ಲಿ ನಡೆದ ಪುರಾತತ್ವ ಭೂ ಶೋಧನೆಗಳಿಂದ ದೊರೆತಿರುವ ಚಿನ್ನವು ರಾಯಚೂರಿನ (ಕರ್ನಾಟಕ) ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ಇತಿಹಾಸ ತಜ್ಞರು ಕ್ರಿ.ಪೂ. 3000ದಲ್ಲೆ ರಾಯಚೂರಿನ ಇತಿಹಾಸವನ್ನು ಅಳೆಯಬೇಕಾಗಿದೆ ಹಾಗೂ ಕ್ರಿ.ಪೂ. 300ಕ್ಕಿಂತ ಮೊದಲು ರಾಯಚೂರನ್ನು ಒಳಗೊಂಡಂತೆ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತೆಂದು ತಿಳಿದು ಬರುತ್ತದೆ. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ರಾಯಚೂರನ್ನು ಆಳಿದ್ದರು. ಶಾತವಾಹನರ ಅವನತಿಯು ಪ್ರಪ್ರಥಮ ಕರ್ನಾಟಕ ಸಾಮ್ರಾಜ್ಯವಾದ ಕದಂಬ ಸಾಮ್ರಾಜ್ಯದ ಉಗಮಕ್ಕೆ ನಾಂದಿಯಾಯಿತು.

ರಾಯಚೂರು ಜಿಲ್ಲೆಯ ಇತಿಹಾಸ ಭಾರತದ ಚರಿತ್ರೆಯಲ್ಲಿ ತುಂಬಾ ಮಹತ್ವದ್ದಾಗಿದೆ. ಅನೇಕ ಪ್ರಮುಖ ಮಾಹಿತಿಗಳು, ದಾಖಲೆಗಳಿಂದ ಇದರ ಚರಿತ್ರೆಯೂ ಸ್ವಾರಸ್ಯಕರವಾಗಿ, ಇತಿಹಾಸ ತಜ್ಞರಿಗೆ ತುಂಬಾ ಆಸಕ್ತಿ ಮೂಡಿಸುವ ಕಥಾನಕಗಳನ್ನು ಹೊಂದಿದೆ.

ರಾಯಚೂರು ಕೋಟೆಯ ಶಾಸನ: ಕಾಕತೀಯ ರಾಣಿ ರುದ್ರಮದೇವಿ ಕಟ್ಟಿಸಿದ ರಾಯಚೂರಿನ ಮೊದಲ ಸುತ್ತಿನ ಕೋಟೆ ರಾಜ್ಯದ ಎಲ್ಲ ಕೋಟೆಗಳಿಗಿಂತ ಸುಭದ್ರವಾದ ಕೋಟೆಯಾಗಿದೆ. ಬೃಹತ್ ಕಲ್ಲುಗಳಿಂದ, ಕಂದಕಗಳು, ಕೊತ್ತಲಗಳು ಮತ್ತು ಬುರುಜುಗಳಿಂದ ಕಲಾತ್ಮಕತೆಯಿಂದ ನಿರ್ಮಾಣಗೊಂಡಿವೆ. ಈ ಕೋಟೆಯನ್ನು ಕ್ರಿ.ಶ. 1294ರ ನವೆಂಬರ್ 23 ರಂದು ಕಟ್ಟಿಸಿರುವ ಬಗ್ಗೆ ಬೃಹತ್ ಶಿಲಾ ಶಾಸನದಲ್ಲಿ ಹೇಳಲಾಗಿದೆ. ಸುಮಾರು 42 ಅಡಿ ಉದ್ದದ ಏಕಶಿಲೆ, ಮೂರು ಅಡಿ ಎತ್ತರದ ಶಿಲಾಶಾಸನವು ತುಂಬಾ ವಿಶಿಷ್ಟವಾಗಿದೆ. ಈ ಶಾಸನ ಕನ್ನಡ ಲಿಪಿಯಲ್ಲಿದ್ದು ತೆಲುಗು ಭಾಷೆಯಲ್ಲಿದೆ. “ಸರ್ವ ರಾಷ್ಟ್ರ ಸಮಸ್ತ ಪ್ರಜಾ ರಕ್ಷಣಾರ್ಥ” ಈ ಕೋಟೆ ಕಟ್ಟಲಾಗಿದ್ದು ಒಬ್ಬ ಮಹಿಳಾ ರಾಣಿ ತನ್ನ ಜನರಿಗಾಗಿ ಕಟ್ಟಿಸಿದುದು ವಿಶೇಷವಾಗಿದೆ. ಇಂದಿಗೂ ರಾಯಚೂರಿನ ಬಸ್ ನಿಲ್ದಾಣದ ಕೋಟೆ ಗೋಡೆಗಿರುವ ಈ ಬೃಹತ್ ಶಾಸನವನ್ನು ಕಾಣಬಹುದು.

ಮಸ್ಕಿಯ ಅಶೋಕನ ಶಿಲಾ ಶಾಸನ: ರಾಯಚೂರು ಜಿಲ್ಲೆ ಐತಿಹಾಸಿಕವಾಗಿ ತುಂಬಾ ಮಹತ್ವ ಸ್ಥಾನ ಹೊಂದಿರುವುದಕ್ಕೆ ಮಸ್ಕಿಯ ಅಶೋಕನ ಶಾಸನವೂ ಒಂದು. ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯ ಚಕ್ರವರ್ತಿ ಸಾಮ್ರಾಟ ಅಶೋಕನು ದಕ್ಷಿಣಾಪಥದ ಸಂಚಾರ ನಿಮಿತ್ತ ಈ ಭಾಗಕ್ಕೆ ಬಂದಾಗ, ಮಸ್ಕಿಯಲ್ಲಿ ಶಾಸನವನ್ನು ಬರೆಯಿಸಿದ್ದಾನೆ. ಕರ್ನಾಟಕದಲ್ಲಿನ ಒಟ್ಟು ಹತ್ತು ಅಶೋಕನ ಶಾಸನಗಳಲ್ಲಿ ಮಸ್ಕಿಯಲ್ಲಿ ಒಂದು ಮತ್ತು ಕೊಪ್ಪಳ (ಅಂದಿನ ರಾಯಚೂರು ಜಿಲ್ಲೆ) ಮೂರು ಶಾಸನಗಳಿವೆ. ಇವುಗಳಲ್ಲಿ ಮಸ್ಕಿ ಶಾಸನ ಭಾರತದಲ್ಲಿ ತುಂಬಾ ವಿಶೇಷವಾದುದಾಗಿದೆ. ಅಶೋಕನ ಒಟ್ಟಾರೆ ಶಾಸನಗಳಲ್ಲಿ ತನ್ನ ಪೂರ್ಣ ಹೆಸರನ್ನು ದಾಖಲಿಸದೆ ಕೇವಲ ದೇವನಾಂಪ್ರಿಯ, ಪ್ರಿಯದರ್ಶಿ ಎಂಬುದನ್ನು ಮಾತ್ರ ಬರೆಯಿಸಿದ್ದಾನೆ. ಆದರೆ ಮಸ್ಕಿಯ ಶಾಸನದಲ್ಲಿ ಮೊದಲ ಬಾರಿಗೆ ಅಶೋಕ ತನ್ನ ಹೆಸರನ್ನು “ದೇವನಾಂಪ್ರಿಯ ಅಶೋಕ ಎಂಬ ನಾನು ಎಂದು (ದೇವನಾಂಪಿಯಸ ಅಸೋಕ) ಮೊದಲ ಸಾಲಿನಲ್ಲಿಯೇ ಹೇಳುತ್ತಾನೆ. ಇದು ಬ್ರಾಹ್ಮಿ ಲಿಪಿಯಲ್ಲಿದೆ. ಆ ವರೆಗಿನ ಎಲ್ಲ ಶಾಸನಗಳಲ್ಲಿನ ದೇವನಾಂಪ್ರಿಯ ಎಂಬವನು ಅಶೋಕನೇ ಎಂಬುದು ಜಗತ್ತಿಗೆ ಗೊತ್ತಾಗಿದ್ದು, ಇದೂ ಅಲ್ಲದೇ ಈ ಶಾಸನದಲ್ಲಿರುವ ಬಹು ಮುಖ್ಯವಾದ ವಿಷಯವೆಂದರೆ ಬೌದ್ಧ ಧರ್ಮವು ಸರ್ವ ಸಮಾನತೆಯನ್ನು ಸಾರಿದ್ದುದನ್ನು ಹೇಳಿರುವುದು. ಜಂಬೂ ದ್ವೀಪದಲ್ಲಿ ಈ ವರಿಗೂ ಕೆಲವೇ ಮಂದಿ ದೇವರನ್ನು ಸಮೀಪಿಸಿದ್ದರು. ನಾನು ಈಗ್ಗೆ ಎರಡುವರೆ ವರ್ಷದಿಂದ ಬೌದ್ಧ ಧರ್ಮದ ಅನುಯಾಯಿಯಾದ ನಂತರ ಒಬ್ಬ ಸಾಮಾನ್ಯ ವ್ಯಕ್ತಿಯೂ ಉನ್ನತ ಸ್ಥಾನಮಾನ ಹೊಂದಲು ಅವಕಾಶ ಕಲ್ಪಿಸುವ ಕಾರ್ಯದಲ್ಲಿದ್ದೇನೆಂಬುದನ್ನು ಹೇಳುತ್ತಾನೆ. ಹಾಗಾಗಿ ಬೌದ್ಧ ಧರ್ಮದಲ್ಲಿ ಸರ್ವರೂ ಸಮಾನರು ಎಂಬುದನ್ನು ಸಾರುತ್ತಾನೆ. ಅಶೋಕನು ದೇವರಿಗೆ ಪ್ರಿಯವಾದವನು” ಎಂಬುದನ್ನು ಈ ಶಾಸನ ಹೇಳುತ್ತದೆ.

ಶ್ರೀಕೃಷ್ಣದೇವರಾಯನ ರಾಯಚೂರು ಯುದ್ಧ: ಶ್ರೀ ಕೃಷ್ಣದೇವರಾಯನ ಜೀವನದಲ್ಲಿ ಮತ್ತು ಕರ್ನಾಟಕದ ಇತಿಹಾಸದಲ್ಲಿ ರಾಯಚೂರು ಯುದ್ಧ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಯುದ್ಧದ ಕಥಾನಕವನ್ನು ಕಣ್ಣಾರೆ ಕಂಡ ನೂನಿಜ್ ಎಂಬ ವಿದೇಶೀ ಪ್ರವಾಸಿಗ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಈತನ ಪ್ರಕಾರ ಯುದ್ಧಾಳುಗಳೇ ಸುಮಾರು 7,36,000 ಇದ್ದರಲ್ಲದೆ 550 ಆನೆಗಳಿದ್ದವು. ಸೈನ್ಯ ಏಳು ದಳಗಳಲ್ಲಿ ಮುನ್ನಡೆಯಿತು ಮತ್ತು ಇತರ ಸೈನ್ಯಗಳೂ ರಾಯಚೂರು ತಲುಪುವ ಮುನ್ನ ಬಂದು ಸೇರಿದವು. ಈ ಸೈನ್ಯ ರಾಯಚೂರು ಕೋಟೆಯ ಪೂರ್ವ, ಆಗ್ನೇಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಕೆಲವು ದಿನ ತಂಗಿತ್ತು. ದಿನಾಂಕ:19-05-1520 ರಂದು ಸೈನ್ಯಗಳು ಯುದ್ಧದಲ್ಲಿ ತೊಡಗಿಕೊಂಡವು. ಭೀಕರ ಯುದ್ಧ, ಧೂಳು ಮುಗಿಲು ಮುಟ್ಟಿತ್ತು. ಒಂದು ಲಕ್ಷ ಸೈನ್ಯ ಹೊಂದಿದ್ದ ಅದಿಲ್‌ಶಾಹನು, ಕೃಷ್ಣದೇವರಾಯನ ಬೃಹತ್ ಸೈನ್ಯದ ಮುಂದೆ ಪಲಾಯನ ಮಾಡಿದನು. ಕೃಷ್ಣದೇವರಾಯ ಯುದ್ಧದಲ್ಲಿ ಕೋಟೆಯನ್ನು ಗೆದ್ದು ತನ್ನ ವಶಕ್ಕೆ ಪಡೆದುಕೊಂಡನು. ರಾಯಚೂರಿನಲ್ಲಿ ನಡೆದ ಒಟ್ಟಾರೆ 13 ಯುದ್ಧಗಳಲ್ಲಿ ಈ ಯುದ್ಧ ತುಂಬಾ ಭೀಕರವಾಗಿತ್ತೆಂದು ಸೈನಿಕರ ಘೋಷಣೆಗಳು, ರಕ್ತಪಾತ ಇತ್ಯಾದಿಗಳಿಂದ ಭಯಂಕರ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಯುದ್ಧವು ನೇರವಾಗಿ ರಾಯಚೂರಿನಲ್ಲಿ ನಡೆಯದೇ ರಾಯಚೂರಿನ ಉತ್ತರ ಈಶಾನ್ಯ ಧಿಕ್ಕಿನ ಕೃಷ್ಣಾ ನದಿಯ ದಡದಲ್ಲೇ ನಡೆದುದು. ಒಂದು ವಿಶೇಷ ಸಂಗತಿ ಏನೆಂದರೆ, ಅದಿಲ್ ಷಾ ಸೈನ್ಯ ಅದೇ ಧಿಕ್ಕಿನಿಂದ ರಾಯಚೂರು ಕಡೆ ಮುನ್ನುಗ್ಗುವುದನ್ನು ಗಮನಿಸಿದ ಶ್ರೀಕೃಷ್ಣದೇವರಾಯ ಅಲ್ಲಿಗೆ ಹೋಗಿ ಅವರನ್ನು ಯುದ್ಧದಲ್ಲಿ ಹಿಮೆಟ್ಟಿದ ಎಂಬುದು ನ್ಯೂನಿಜ್‌ನ ವಿವರವಾಗಿದೆ.

ಹೀಗೆ ಕ್ರಿ.ಶ.1520 ರಿಂದ ರಾಯಚೂರು ಕ್ರಿ.ಶ.1565 ರವರೆಗೆ ವಿಜಯನಗರ ಅರಸರ ಆಡಳಿತಕ್ಕೆ ಒಳಪಟ್ಟಿತ್ತು.

ಹಟ್ಟಿಚಿನ್ನದ ಗಣಿ:

ಇದು ಜಗತ್ತಿನ ಪುರಾತನ ಚಿನ್ನದ ಗಣಿಗಳಲ್ಲಿ ಒಂದಾಗಿದೆ. ಇದಕ್ಕೆ ಸುಮಾರು 4000 ವರ್ಷಗಳ ಇತಿಹಾಸವಿದೆ. ಇಂದು ಭಾರತದ ಏಕೈಕ ಚಿನ್ನವನ್ನು ಉತ್ಪಾದಿಸುವ ಗಣಿಯಾಗಿದೆ.

ಪ್ರಾಚೀನ ಕಾಲದಿಂದಲೂ ಇಲ್ಲಿ ಚಿನ್ನವನ್ನು ಉತ್ಪಾದಿಸಲಾಗುತ್ತಿತ್ತು. ಕ್ರಿ.ಶ. 1887ರಲ್ಲಿ ನಿಜಾಂನ ಆಡಳಿತದಲ್ಲಿ ಇದಕ್ಕೆ “ಹೈದರಾಬಾದ್ ಡೆಕ್ಕನ್ ಮೈನ್ಸ್’ ಎಂದು ಕರೆಯಲಾಗುತ್ತಿತ್ತು. ಕ್ರಿ.ಶ. 1920ರ ಪ್ರಥಮ ಜಾಗತಿಕ ಯುದ್ಧದ ಪರಿಣಾಮ ಕೆಲವು ಕಾಲ ಗಣಿಯನ್ನು ಸ್ಥಗಿತಗೊಳಿಸಲಾಗಿತ್ತು. ಕ್ರಿ.ಶ. 1928ರಲ್ಲಿ ಪುನಃ ಪ್ರಾರಂಭಿಸಲಾಯಿತು. ಕ್ಯಾಪ್ಟನ್ ಲಿಯೋನಾರ್ಡ್‌ಮನ್‌ರು ನೀಡಿದ ವರದಿಯಂತೆ ವಿಫುಲ ಚಿನ್ನದ ಅದಿರನ್ನು ಉತ್ಪಾದಿಸಲು ಆಧುನಿಕ ಪದ್ಧತಿಯನ್ನು ಅಳವಡಿಸಲಾಯಿತು.

ಹಟ್ಟಿ ಎಂದರೆ ಚಿನ್ನದ ಗಟ್ಟಿ ಎಂದೇ ಖ್ಯಾತವಾಗಿದೆ. ಈ ಗಣಿಯು ಚಿನ್ನದ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಗೈದು ಭಾರತವನ್ನೂ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಹಾಗಾಗಿ ಈ ಚಿನ್ನದ ಗಣಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಹೀಗೆ ರಾಯಚೂರಿನ ಇತಿಹಾಸದ ಜೊತೆಗೆ ಕೆಲವು ವಿಶಿಷ್ಟ ಸಂಗತಿಗಳು ಕಾಣಸಿಗುತ್ತವೆ.